ಇಂಡಿಯನ್ ಇಂಕ್
ನಕಾಸೆ ಮತ್ತು ಚಿತ್ರಕಲೆಗಳಲ್ಲಿ ವಿಶೇಷವಾಗಿ ಬಳಸುವ ಈ ಶಾಯಿಯನ್ನು ಕಾಡಿಗೆ ಅಥವಾ ದೀಪದ ಮಸಿಯಿಂದ ತಯಾರಿಸುವರು. ಚೀನೀ ಇಂಕ್ ಎಂದೂ ಹೆಸರು ಇತ್ತು. ಕಾಡಿಗೆಯನ್ನು ಗೋಂದಿನಲ್ಲಿ ಕಲಸಿ ಒಣಗಿಸಿ, ಕಡ್ಡಿ ಅಥವಾ ಬಿಲ್ಲೆಗಳಾಗಿ ಮಾಡಲಾಗುವುದು. ಚೀನೀ ಇತಿಹಾಸಕಾರರ ಪ್ರಕಾರ ಕ್ರಿ. ಪೂ. 2697-2597ರ ಅವಧಿಯಲ್ಲಿ ಜೀವಿಸಿದ್ದ ಟೇನ್‍ಷಿನ್ ಎಂಬಾತ ಇದನ್ನು ಕಂಡುಹಿಡಿದನಂತೆ. ಇದರ ತಯಾರಿಕೆಗೆ ಅಗತ್ಯವಾದ ಕಾಡಿಗೆಯನ್ನು ನಾನಾ ಮೂಲಗಳಿಂದ ಪಡೆಯಬಹುದು. ಅವುಗಳ ಪೈಕಿ ಫರ್ ಮತ್ತು ಪೈನ್ ಮರ, ಹೈಬಿಸ್‍ಕಸ್ ಮುಟಬಾಲಿಸ್ ಗಿಡದ ಕಷಾಯದಲ್ಲಿ ನೆನೆದ ಅಕ್ಕಿ, ವಿನೆಗರ್ ಹೀರಿಕೊಂಡಿರುವ ದಾಳಿಂಬೆ ತೊಗಟೆ, ಎಳ್ಳು ಮತ್ತು ಮರದೆಣ್ಣೆಗಳನ್ನು ಹೆಸರಿಸಬಹುದು. ಎತ್ತು ಅಥವಾ ಮೀನಿನ ಅಂಟು ಅವಶ್ಯಕ. ಅಂಟಿನೊಂದಿಗೆ ನಾದಿದ ಕಾಡಿಗೆಯನ್ನು ಮರದ ಎರಕಗಳಲ್ಲಿ ತುಂಬಿ ತಂಪಾದ ಶುಷ್ಕ ಹವೆಯಲ್ಲಿ ಆರಲು ಬಿಡಬೇಕು. ದೀರ್ಘಕಾಲ ಬಿಟ್ಟಷ್ಟೂ ವಸ್ತುವಿನ ಗುಣಮಟ್ಟ ಹೆಚ್ಚುವುದು. ಶಾಯಿಯ ಬಣ್ಣ ವಾಸನೆಗಳನ್ನು ಆಕರ್ಷಕಗೊಳಿಸಲು ಕಸ್ತೂರಿ, ಕರ್ಪೂರ ಮತ್ತು ತತ್ಸಮವಾದ ಸುಂಗಂಧಸಾರ ದ್ರವ್ಯಗಳನ್ನು ಬೆರೆಸುವುದು ವಾಡಿಕೆ. ಈಗ ಇದನ್ನು ಜಲಬಾಧಿತವನ್ನಾಗಿ ಮಾಡಿದ್ದಾರೆ.		

 (ಎಚ್.ಜಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ